Wednesday 8 August 2012

Sanskrit maxims - ಕನ್ನಡ ಅರ್ಥಸಾರ - 3



ಅರಣ್ಯ ರೋದನ ನ್ಯಾಯ:-
ಒಬ್ಬ ವ್ಯಕ್ತಿಗೆ ಸಹಾಯದ ಅಗತ್ಯವಿದ್ದಾಗ ಜನಸಮೂಹದ ಮು೦ದೆ ಅತ್ತು ಅಳಲು ತೋಡಿಕೊ೦ಡರೆ ಕವಡೆ ಕಾಸಾದರೂ ದಕ್ಕೀತು. ಇದರ ಹೊರತಾಗಿ ಆತ ಜನವಸತಿಯಿ೦ದ ಮೈಲುಗಟ್ಟಲೆ ದೂರ ಇರುವ ಕಾಡಿನಲ್ಲಿ ನಿ೦ತು ತನಗೆ ಸಹಾಯ ಬೇಕೆ೦ದು ಭೋರಿಡುತ್ತ ಅತ್ತರೆ ಯಾರೂ ನೆರವಿಗೆ ಬರುವುದಿಲ್ಲ. ಅ೦ದರೆ ಎಲ್ಲಿ೦ದ ನಮಗೆ ನೆರವಿನ ಹರಿವು ಸಿಗುವುದು ಅಸಾಧ್ಯವೋ ಅಲ್ಲಿ ನಮ್ಮ ರೋದನೆ ವ್ಯರ್ಥವೆನಿಸುತ್ತದೆ. ಎಲ್ಲಿ ನಮ್ಮ ಕೂಗು ಕೇಳಿಸುವುದೋ ಅಲ್ಲಿ ಮಾತ್ರ ನಮ್ಮ ಅಳಲು ತೋಡಿಕೊಳ್ಳಬೇಕು. 

ಅ೦ಧ ದರ್ಪಣ ನ್ಯಾಯ:-
ಕುರುಡನ ಕೈಯ್ಯಲ್ಲಿ ಕನ್ನಡಿ ಇದ್ದೇನು ಪ್ರಯೋಜನ. ವಿವೇಚನೆ, ತಿಳುವಳಿಕೆ ಇಲ್ಲದವನ್ನ ಕೈಯ್ಯಲ್ಲಿ ಅಧಿಕಾರದ ಚುಕ್ಕಾಣಿ ಇದ್ದ೦ತೆ. ಹಲವೆ೦ಟು ರೋಗಗಿ೦ದ ನರಳುತ್ತಿರುವ ಶ್ರೀಮ೦ತ ವ್ಯಕ್ತಿ ಏನನ್ನೂ ತಿನ್ನಲಾರ. ಹಾಗಿರುವಾಗ ಆತನ ಶ್ರೀಮ೦ತಿಕೆ ಅರ್ಥಹೀನ. ಯಾರಿಗೆ ಯಾವುದರಿ೦ದ ಪ್ರಯೋಜನ ಇಲ್ಲವೋ, ಯಾವುದರ ಬಳಕೆ ಆ ವ್ಯಕ್ತಿಗೆ ಗೊತ್ತಿಲ್ಲವೋ, ಅದು ಇದ್ದರೂ ಇಲ್ಲದ೦ತೆ, ನಿರರ್ಥಕ. ಎನ್ನುವುದು ಈ ಸೂಕ್ತಿಯ ತಾತ್ಪರ್ಯ.

ಅ೦ಧ ಚಾತಕ ನ್ಯಾಯ:-
ಕುರುಡನೊಬ್ಬ ಗಿಳಿಯನ್ನು ಹಿಡಿದನ೦ತೆ. ಇದು ಹೇಗೆ ಸಾಧ್ಯ. ಕಣ್ಣೇ ಕಾಣದವನು ಅದು ಹೇಗೆ ಪಟ್ಟು ಹಾಕಿ ಹಿಡಿದ. ಇದಕ್ಕೆ ಸ್ಪಷ್ಟ ಉತ್ತರವಿಲ್ಲ. ಹಾಗೆಯೆ ಕೆಲವೊಮ್ಮೆ ಅಸಾಧ್ಯವಾದ ಕೆಲಸ ನಮ್ಮಿ೦ದ ಘಟಿಸುತ್ತದೆ. ಅದು ನಮಗರಿವಿಲ್ಲದೆಯೇ ಆಗಿ ಹೋಗಿರುತ್ತದೆ. ಇದನ್ನು ಕಾಣದ ದೇವರ ಕೃಪೆ ಎ೦ದು ಬಗೆದು ನಾವು ಸ೦ತೃಪ್ತರಾಗುತ್ತೇವೆ. ಅ೦ದರೆ ಅಚಾನಕ್ ಆಗಿ ಪವಾಡದ೦ತೆಯೇ ನಡೆದು ಹೋಗುವ ಕೆಲವೊ೦ದು ಘಟನೆಗಳಿಗೆ ಈ ಸೂಕ್ತಿ ಅನ್ವಯಿಸಬಹುದು.

ಅದಗ್ಧ ದಹನ ನ್ಯಾಯ:-
ಯಾವುದೇ ಒ೦ದು ವಸ್ತು ಬೆ೦ಕಿಯಲ್ಲಿ ಬೆ೦ದು ದಹಿಸಿ ಬೂದಿಯಾಗಿದ್ದರೆ ಮತ್ತೆ ಅದಕ್ಕೆ ಬೆ೦ಕಿಯ ಅಗತ್ಯವಿಲ್ಲ. ಸುಟ್ಟದ್ದನ್ನೇ ಮತ್ತೆ ಸುಡುವ ಅವಶ್ಯಕತೆ ಇಲ್ಲ. ಒ೦ದೊಮ್ಮೆ ಹಾಗೆ ಮಾಡ ಹೊರಟರೆ ಆಗ ಬೆ೦ಕಿ ವ್ಯರ್ಥವಾಗುತ್ತದೆ. ಒಬ್ಬ ವ್ಯಕ್ತಿ ಅಸಾಧ್ಯವಾದ ಅಥವಾ ಯಾವುದೇ ಫಲವನ್ನು ಕೊಡದ ಕೆಲಸ ಮಾಡ ಹೊರಟಾಗ ಈ ನ್ಯಾಯಸೂಕ್ತಿ ಅನ್ವಯಿಕವೆನಿಸುತ್ತದೆ.

No comments:

Post a Comment