Wednesday 29 February 2012

ಒ೦ದು ಕಣ್ಣಿಗೆ ಬೆಣ್ಣೆ ಒ೦ದು ಕಣ್ಣಿಗೆ ಸುಣ್ಣ



ಕಡಲತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ಸಾಹಿತಿ ಕೋಟ ಶಿವರಾಮ ಕಾರ೦ತರ ಮನೆ ಚತುಷ್ಪಥ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ನೆಲಸಮವಾಗಿದೆ.  ಸಾಹಿತ್ಯ ಲೋಕದಲ್ಲಿ ಹತ್ತು ಹಲವು ವಿಭಾಗಗಳಲ್ಲಿ ಅನನ್ಯ ಕೃತಿಗಳನ್ನು ನೀಡಿರುವ  ಕಾರ೦ತರು ನಮ್ಮೆಲ್ಲರ ಹೆಮ್ಮೆ.  ಅವರ ಮೂಲಮನೆಯನ್ನು ಉಳಿಸಿಕೊಳ್ಳುವ, ಅದನ್ನು ಸುಸ್ಥಿತಿಯಲ್ಲಿತ್ತು ಮುಂದಿನ ಪೀಳಿಗೆಗೆ ಕಾರ೦ತರ ನೆನಪು ಹಸಿರಾಗಿರಿಸುವ ಕಾರ್ಯವನ್ನು ಮಾಡಬೇಕಾದ ಸರಕಾರ ಮಗುಮ್ಮಾಗಿರುವುದು ಖ೦ಡನೀಯ.  ಎಲ್ಲ ದೇಶಗಳಲ್ಲೂ   ಸಾಹಿತಿ-ಕಲಾವಿದರ ಮನೆಯನ್ನು ಸ್ಮಾರಕದ೦ತೆ ಉಳಿಸಿ ಬೆಳೆಸುವ ಪ್ರವೃತ್ತಿ ಇದೆ.  ಆದರೆ ನಮ್ಮಲ್ಲಿ ಅದು ನಶಿಸುತ್ತಿರುವುದು ನಮ್ಮ ಅಧಿಕಾರಸ್ಥರ ಅಸಡ್ಡೆ ಮತ್ತು  ಬೌದ್ಧಿಕ ದಿವಾಳಿತನದ ಪ್ರತೀಕವಾಗಿದೆ.  ನಮ್ಮ ಇನ್ನೊಬ್ಬ ಮೇರುಸಾಹಿತಿ, ರಾಷ್ಟ್ರಕವಿ ಕುವೆ೦ಪು ಅವರ ಕುಪ್ಪಳ್ಳಿಯ ಮನೆ ಮಾತ್ರ ಅತ್ಯುತ್ತಮ ಸ್ಮಾರಕವಾಗಿ ಉಳಿದಿದ್ದು, ಅದರ ಅಭಿವೃದ್ಧಿಯತ್ತ ರಾಜ್ಯಸರಕಾರ ಆದ್ಯ ಗಮನ ಹರಿಸಿರುವುದು ಶ್ಲಾಘನೀಯ. ಇತ್ತೀಚೆಗಷ್ಟೇ ಕುವೆ೦ಪು ಅವರ ಆಳೆತ್ತರದ ಕ೦ಚಿನ ಪ್ರತಿಮೆ ಬೆ೦ಗಳೂರಿನ  ಫ್ರೀಡಂ ಪಾರ್ಕ್ ಬಳಿ ಅನಾವರಣಗೊ೦ಡಿದೆ.  ಇದು ಕೂಡ ಸ್ತುತ್ಯ ಕಾರ್ಯ.  ಆದರೆ ಕುವೆ೦ಪು ಅವರಿಗೆ ನೀಡಲಾಗಿರುವ ಮನ್ನಣೆ, ಮಾನ್ಯತೆ, ಕನ್ನಡದ ಸ೦ದರ್ಭದಲ್ಲಿ ಅವರಷ್ಟೇ ಪ್ರಮುಖರೆನಿಸುವ ಕಾರಂತರಿಗೇಕಿಲ್ಲ  ?  ಇದು ನನ್ನ ಮನದಲ್ಲೆಳುತ್ತಿರುವ ಪ್ರಶ್ನೆ. ವರಕವಿ ಬೇ೦ದ್ರೆಯವರ ಮನೆ ಏನಾಗಿದೆಯೋ ಗೊತ್ತಿಲ್ಲ, ಮಾಸ್ತಿಯವರ ಮನೆ ಎಲ್ಲಿದೆಯೋ ಗೊತ್ತಿಲ್ಲ. ಅನಕೃ ಮನೆ ಚಪ್ಪಲಿ ಗೋದಾಮಾಗಿದೆ, ಕೈಲಾಸ೦ ಮನೆ ಹೋಟೆಲಾಗಿದೆ. ಮೈಸೂರು ಮಲ್ಲಿಗೆಯ ನರಸಿ೦ಹಸ್ವಾಮಿಯವರ ಮನೆ ಕೂಡ ನೆಲಸಮವಾಗಿದೆ.  ಇವರೆಲ್ಲರ ಬಗ್ಗೆ ನಮಗೆ, ನಮ್ಮ ಅಧಿಕಾರಸ್ಥ ರಾಜಕಾರನಿಗೆಗಳಿಗೆ ಯಾಕಿಷ್ಟು ಅವಜ್ಞೆ. ನಮ್ಮ ನಾಳಿನ ಪೀಳಿಗೆ ನೆನಪಿಡಬೇಕಾದ ಈ ಮಹನೀಯರ ಮನೆಗಳು ಸ್ಮಾರಕವಾಗಿದ್ದಲ್ಲಿ ಅದೆಷ್ಟು ಚೆನ್ನಿರುತ್ತಿತ್ತು.   ಕುವೆ೦ಪು ಅವರಿಗೆ ಸಿಕ್ಕ ಸ್ಥಾನಮಾನ ಉಳಿದವರಿಗೆ ಯಾಕಿಲ್ಲ? ಇದು ನನ್ನ ಮನದಾಳದಲ್ಲಿ ಏಳುತ್ತಿರುವ ಪ್ರಶ್ನೆ. ನಿಮ್ಮ ಅಭಿಪ್ರಾಯ ತಿಳಿಸಿ. 

ಚಿತ್ರಕೃಪೆ: ಪ್ರಜಾವಾಣಿ