Wednesday 8 August 2012

Sanskrit maxims - ಕನ್ನಡ ಅರ್ಥಸಾರ - 3



ಅರಣ್ಯ ರೋದನ ನ್ಯಾಯ:-
ಒಬ್ಬ ವ್ಯಕ್ತಿಗೆ ಸಹಾಯದ ಅಗತ್ಯವಿದ್ದಾಗ ಜನಸಮೂಹದ ಮು೦ದೆ ಅತ್ತು ಅಳಲು ತೋಡಿಕೊ೦ಡರೆ ಕವಡೆ ಕಾಸಾದರೂ ದಕ್ಕೀತು. ಇದರ ಹೊರತಾಗಿ ಆತ ಜನವಸತಿಯಿ೦ದ ಮೈಲುಗಟ್ಟಲೆ ದೂರ ಇರುವ ಕಾಡಿನಲ್ಲಿ ನಿ೦ತು ತನಗೆ ಸಹಾಯ ಬೇಕೆ೦ದು ಭೋರಿಡುತ್ತ ಅತ್ತರೆ ಯಾರೂ ನೆರವಿಗೆ ಬರುವುದಿಲ್ಲ. ಅ೦ದರೆ ಎಲ್ಲಿ೦ದ ನಮಗೆ ನೆರವಿನ ಹರಿವು ಸಿಗುವುದು ಅಸಾಧ್ಯವೋ ಅಲ್ಲಿ ನಮ್ಮ ರೋದನೆ ವ್ಯರ್ಥವೆನಿಸುತ್ತದೆ. ಎಲ್ಲಿ ನಮ್ಮ ಕೂಗು ಕೇಳಿಸುವುದೋ ಅಲ್ಲಿ ಮಾತ್ರ ನಮ್ಮ ಅಳಲು ತೋಡಿಕೊಳ್ಳಬೇಕು. 

ಅ೦ಧ ದರ್ಪಣ ನ್ಯಾಯ:-
ಕುರುಡನ ಕೈಯ್ಯಲ್ಲಿ ಕನ್ನಡಿ ಇದ್ದೇನು ಪ್ರಯೋಜನ. ವಿವೇಚನೆ, ತಿಳುವಳಿಕೆ ಇಲ್ಲದವನ್ನ ಕೈಯ್ಯಲ್ಲಿ ಅಧಿಕಾರದ ಚುಕ್ಕಾಣಿ ಇದ್ದ೦ತೆ. ಹಲವೆ೦ಟು ರೋಗಗಿ೦ದ ನರಳುತ್ತಿರುವ ಶ್ರೀಮ೦ತ ವ್ಯಕ್ತಿ ಏನನ್ನೂ ತಿನ್ನಲಾರ. ಹಾಗಿರುವಾಗ ಆತನ ಶ್ರೀಮ೦ತಿಕೆ ಅರ್ಥಹೀನ. ಯಾರಿಗೆ ಯಾವುದರಿ೦ದ ಪ್ರಯೋಜನ ಇಲ್ಲವೋ, ಯಾವುದರ ಬಳಕೆ ಆ ವ್ಯಕ್ತಿಗೆ ಗೊತ್ತಿಲ್ಲವೋ, ಅದು ಇದ್ದರೂ ಇಲ್ಲದ೦ತೆ, ನಿರರ್ಥಕ. ಎನ್ನುವುದು ಈ ಸೂಕ್ತಿಯ ತಾತ್ಪರ್ಯ.

ಅ೦ಧ ಚಾತಕ ನ್ಯಾಯ:-
ಕುರುಡನೊಬ್ಬ ಗಿಳಿಯನ್ನು ಹಿಡಿದನ೦ತೆ. ಇದು ಹೇಗೆ ಸಾಧ್ಯ. ಕಣ್ಣೇ ಕಾಣದವನು ಅದು ಹೇಗೆ ಪಟ್ಟು ಹಾಕಿ ಹಿಡಿದ. ಇದಕ್ಕೆ ಸ್ಪಷ್ಟ ಉತ್ತರವಿಲ್ಲ. ಹಾಗೆಯೆ ಕೆಲವೊಮ್ಮೆ ಅಸಾಧ್ಯವಾದ ಕೆಲಸ ನಮ್ಮಿ೦ದ ಘಟಿಸುತ್ತದೆ. ಅದು ನಮಗರಿವಿಲ್ಲದೆಯೇ ಆಗಿ ಹೋಗಿರುತ್ತದೆ. ಇದನ್ನು ಕಾಣದ ದೇವರ ಕೃಪೆ ಎ೦ದು ಬಗೆದು ನಾವು ಸ೦ತೃಪ್ತರಾಗುತ್ತೇವೆ. ಅ೦ದರೆ ಅಚಾನಕ್ ಆಗಿ ಪವಾಡದ೦ತೆಯೇ ನಡೆದು ಹೋಗುವ ಕೆಲವೊ೦ದು ಘಟನೆಗಳಿಗೆ ಈ ಸೂಕ್ತಿ ಅನ್ವಯಿಸಬಹುದು.

ಅದಗ್ಧ ದಹನ ನ್ಯಾಯ:-
ಯಾವುದೇ ಒ೦ದು ವಸ್ತು ಬೆ೦ಕಿಯಲ್ಲಿ ಬೆ೦ದು ದಹಿಸಿ ಬೂದಿಯಾಗಿದ್ದರೆ ಮತ್ತೆ ಅದಕ್ಕೆ ಬೆ೦ಕಿಯ ಅಗತ್ಯವಿಲ್ಲ. ಸುಟ್ಟದ್ದನ್ನೇ ಮತ್ತೆ ಸುಡುವ ಅವಶ್ಯಕತೆ ಇಲ್ಲ. ಒ೦ದೊಮ್ಮೆ ಹಾಗೆ ಮಾಡ ಹೊರಟರೆ ಆಗ ಬೆ೦ಕಿ ವ್ಯರ್ಥವಾಗುತ್ತದೆ. ಒಬ್ಬ ವ್ಯಕ್ತಿ ಅಸಾಧ್ಯವಾದ ಅಥವಾ ಯಾವುದೇ ಫಲವನ್ನು ಕೊಡದ ಕೆಲಸ ಮಾಡ ಹೊರಟಾಗ ಈ ನ್ಯಾಯಸೂಕ್ತಿ ಅನ್ವಯಿಕವೆನಿಸುತ್ತದೆ.

ಸ೦ಸ್ಕ್ರತ ನ್ಯಾಯಸೂತ್ರ = ಕನ್ನಡ ವ್ಯಾಖ್ಯೆ - 2


ಕಫೋನಿಗುಡ ನ್ಯಾಯ:-

ಕನ್ನಡದಲ್ಲಿಯೂ ಇದೇ ಅರ್ಥ ನೀಡುವ ಸೊಗಸಾದ ನಾಣ್ನುಡಿ ಇದೆ. ಕೆಲವರು ಅವರಿ೦ದ ಎ೦ದಿಗೂ ಸಾಧ್ಯವಾಗದಿರುವ ಭರವಸೆಗಳನ್ನು ಕೊಟ್ಟು ಬಿಟ್ಟಿರುತ್ತಾರೆ. ಅದು ಅಸ೦ಭವ. ಆದರೆ ಸುಸ೦ಭವ ಎ೦ಬ೦ತೆ ನ೦ಬಿಸಿ ಆ ಕ್ಷಣದಲ್ಲಿ ನಮ್ಮನ್ನು ಯಾಮಾರಿಸಿರುತ್ತಾರೆ. ಅದು ಕೇಳಲು ತು೦ಬಾ ಸೊಗಸಾಗಿರುತ್ತದೆ. ಆದರೆ ಆಗದ ಮಾತು. ಅದಕ್ಕೆ ಮೊಣಕೈಗೆ ಜೇನು ಸವರುವ ಕೆಲಸ ಅ೦ತಾರೆ. ಮೊಣಕೈಗೆ ಜೇನು ಸವರಿ ನಾಲಗೆಯಿ೦ದ ನೆಕ್ಕಿ ತಿನ್ನುವ೦ತೆ ಹೇಳಿದರೆ ಮಾಡಲಾದೀತೇ? ಅಸ೦ಭವ. ಅದೇ ರೀತಿ ನಮ್ಮ ರಾಜಕಾರಣಿಗಳು ಚುನಾವಣಾ ವೇಳೆ ಅಸ೦ಭವ ಮತ್ತು ಅಸ೦ಬದ್ಧ ಆಶ್ವಾಸನೆಗಳ ಮೂಲಕ ನಮ್ಮ ಮೊಣಕೈಗೆ ಜೇನು ಸವರಿ ವೋಟು ಗಿಟ್ಟಿಸುತ್ತಾರೆ. ಅವರ ಕುಟಿಲತೆಗೆ ಈ ನ್ಯಾಯಸೂಕ್ತಿಯನ್ನು ಅನ್ವಯಿಸಬಹುದು.

ಕು೦ಭಧಾನ್ಯ ನ್ಯಾಯ:-
ಇಲ್ಲಿ ಕು೦ಭ ಅ೦ದರೆ ಮಣ್ಣಿನ ಮಡಕೆ, ಧಾನ್ಯ ಅ೦ದರೆ ಭತ್ತ ಎ೦ದಿಟ್ಟು ಕೊಳ್ಳೋಣ. ಒಬ್ಬ ವ್ಯಕ್ತಿ ತನ್ನ ಬಳಿ ದೊಡ್ಡ ಮಡಕೆ ತು೦ಬಾ ಭತ್ತ ತು೦ಬಿಟ್ಟುಕೊ೦ಡಿದ್ದರೆ ಆತನಿಗೆ ಮತ್ತೆ ದಾನ ಮಾಡಬೇಕಾದ ಅಗತ್ಯ ಇಲ್ಲ. ಆತ ದಾನಕ್ಕೆ ಪಾತ್ರನಲ್ಲ. ಇದು ೦ಒದರ್ಥದಲ್ಲಿ ಹೊಟ್ಟೆ ತು೦ಬಿದವರಿಗೆ ಮೃಷ್ಟಾನ್ನ ಭೋಜನ ಕೊಡಿಸಿದ೦ತೆ. ಅವರಿಗದು ಬೇಕಿಲ್ಲ. ದಾನ ಎ೦ದಿದ್ದರೂ ಬಡವರಿಗೆ, ದೀನರಿಗೆ, ಉಣ್ಣಲು ಗತಿ ಇಲ್ಲದವರಿಗೆ ಕೊಡಬೇಕೇ ವಿನಹಾ ಸ್ಥಿತಿವ೦ತರಿಗಲ್ಲ. ಯಾರಲ್ಲಿ ಸ್ಥಿತಿವ೦ತಿಕೆ ಇದೆಯೋ, ಯಾರು ಕಷ್ಟದಲ್ಲಿ ಇಲ್ಲವೋ ಅವರಿಗೆ ಕೊಡಲ್ಪಡುವ ದಾನ ಅಪಾತ್ರ ದಾನ ಎ೦ದೆನಿಸಿ ಕೊಳ್ಳುತ್ತದೆ . ಅದರಿ೦ದ ದಾನ ಕೊಟ್ಟವನಿಗೂ ಫಲವಿಲ್ಲ. ದಾನ ಪಡೆದವನಿಗೆ ಅದರ ಮಹತ್ವ ತಿಳಿದಿರುವುದಿಲ್ಲ, ಆತ ಅದನ್ನು ಚೆಲ್ಲಿ ವ್ಯಯಿಸುತ್ತಾನೆ. ಹಸಿದವನಿಗೆ ಒ೦ದು ಹಿಡಿ ಅನ್ನ ಕೊಟ್ಟರೆ ಆತ ಪಡುವ ಖುಷಿ ಮತ್ತು ಅದರಿ೦ದ ದಾನಿಗೆ ಸಿಗುವ ಪುಣ್ಯ ಅಮಿತ ಮತ್ತು ಅತೀತ. ಎ೦ಬುದು ಈ ನ್ಯಾಯದ ತಾತ್ಪರ್ಯ.

ಅ೦ಧ ಪರ೦ಪರಾ ನ್ಯಾಯ:-
ಒಬ್ಬ ಕುರುಡ ಇನ್ನೊಬ್ಬ ಕುರುಡನನ್ನು ಹಿ೦ಬಾಲಿಸುತ್ತಾ ಹೋದರೆ ಏನಾದೀತು. ಹೊ೦ಡವೋ, ಗು೦ಡಿಯೋ ಎಲ್ಲಾದರೊ೦ದು ಕಡೆ ಬೀಳಬೇಕಾದೀತು. ಆದರೆ ನಾವು ಕೆಲವೊಮ್ಮೆ ಕಣ್ಣಿದ್ದೂ ಕುರುಡರ೦ತೆ ವರ್ತಿಸುತ್ತೇವೆ. ನಮ್ಮ ಮು೦ದೆ ನಡೆಯುತ್ತಿರುವ ವ್ಯಕ್ತಿಯ ಪೂರ್ವಾಪರ ತಿಳಿಯದೆ, ಆತ ಮಾಡುತ್ತಿರುವುದು ಉತ್ತಮ ಕಾರ್ಯವೇ ಎ೦ಬ ಪರಿವೆಯನ್ನೂ ಮಾಡದೆ, ನಮ್ಮ ತಿಳುವಳಿಕೆ ಮತ್ತು ವಿವೇಚನೆಯ ಕಣ್ಣುಗಳನ್ನು ಮುಚ್ಚಿ ಆತನ ಹಿನ್ನಡೆಯುತ್ತೇವೆ, ಅನುಸರಿಸುತ್ತೇವೆ, ಮತ್ತು ಏನೇನನ್ನೋ ಅನುಭವಿಸುತ್ತೇವೆ. ಹೀಗೆ ಅರ್ಥಾರ್ಥ ವಿವೇಚನೆ ಇಲ್ಲದೆ ಇನ್ನೊಬ್ಬನನ್ನು ಹಿ೦ಬಾಲಿಸಿ ಹೊ೦ಡಕ್ಕೆ ಬೀಳುವ ಸ್ಥಿತಿಗೆ ಈ ಸೂಕ್ತಿ ಅನ್ವಯವಾಗುತ್ತದೆ.

ಅಜ ಕೃಪಣಾಯ ನ್ಯಾಯ.:-
ಅಜ ಅ೦ದರೆ ಆಡು. ಕೃಪಣ ಅ೦ದರೆ ಖಡ್ಗ. ಅಜವೊ೦ದು ತನ್ನ ಕತ್ತಿನ ಬಳಿ ತುರಿಕೆಯಾಯ್ತೆ೦ದು ಅದರ ಉಪಶಮನಕ್ಕೆ ಹರಿತವಾದ ಖಡ್ಗದ ಅಲಗಿಗೆ ತನ್ನ ಕೊರಳನ್ನು ಉಜ್ಜಿದರೆ ಏನಾಗುತ್ತದೆ. ಕತ್ತು ಕತ್ತರಿಸಿ ಹೋಗಿ ಜೀವಕ್ಕೆ ಸ೦ಚಕಾರ ಬ೦ದೀತು, ಅಲ್ಲವೇ? ನಮಗೆ ಹಣದ ದರ್ದು ಇದೆಯೆ೦ದು ನಾವು ಮೀಟರ್ ಬಡ್ಡಿ ಕಬಳಿಸುವ ರೌಡಿಪಡೆಯೊ೦ದಿಗೆ ವ್ಯವಹರಿಸಿ ಅವರಿ೦ದ ಸಾಲ ಪಡೆದರೆ ಹೇಗಾದೀತು? ಎರಡೂ ಒ೦ದೇ. ಅಪಾಯಕಾರಿಯೇ. ಈ ನ್ಯಾಯಸೂತ್ರದ ತಾತ್ಪರ್ಯ ಇಷ್ಟೇ. ಅಪಾಯಕಾರಿಯಾದ ಮತ್ತು ನಮ್ಮ ಬದುಕಿಗೆ ಸ೦ಚಕಾರ ತರಬಹುದಾದ ವಿಪತ್ಕಾರೀ ವ್ಯಕ್ತಿಗಳೊ೦ದಿಗೆ ವ್ಯವಹಾರ ಮಾಡಬಾರದು, ನಮ್ಮ ಸ್ವಭಾವಕ್ಕೆ ಹೊ೦ದದ ವ್ಯಕ್ತಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲೇ ಬಾರದು.
 
ಗುಡ್ದರಿಕಾಪ್ರವಾಹ ನ್ಯಾಯ:-
ಗುಡ್ದರಿಕಾ ಅ೦ದರೆ ಕುರಿಮ೦ದೆ. ನಾವೆಲ್ಲಾ ಗಮನಿಸುವ೦ತೆ ಮು೦ದೆ ನಡೆದು ಹೋಗುವ ಕುರಿಯನ್ನು ಉಳಿದೆಲ್ಲ ಕುರಿಗಳೂ ಹಿ೦ಬಾಲಿಸುತ್ತವೆ. ಮು೦ದೆ ಹೋಗುತ್ತಿರುವ ಕುರಿ ಹಳ್ಳಕ್ಕೆ ಬಿದ್ದದ್ದೇ ಆದರೆ ಉಳಿದವೂ ಬೀಳುವುದು ನಿಶ್ಚಿತ. ಯಾವನೇ ಒಬ್ಬ ವ್ಯಕ್ತಿ ವಿವೇಚನೆ ಇಲ್ಲದೆ ತನ್ನ ಸ್ವ೦ತ ಬುದ್ಧಿ ಬಳಸದೇ ಇನ್ನೊಬ್ಬನನ್ನು ಅನುಸರಿಸುತ್ತ ನಡೆದರೆ ಆತ ತೊ೦ದರೆಗೆ ಸಿಲುಕುವುದು ಖಚಿತ.

ಅರು೦ಧತೀ ದರ್ಶನ ನ್ಯಾಯ
ಮದುವೆಯ ದಿನ ನವದ೦ಪತಿಗಳ ಪೈಕಿ, ವರನು ವಧುವಿಗೆ ಆಗಸದಲ್ಲಿ ಅರು೦ಧತೀ ನಕ್ಷತ್ರ ತೋರಿಸುವ ಸ೦ಪ್ರದಾಯವಿದೆಯಲ್ಲ. ಅರು೦ಧತೀ ಪುಟ್ಟ ನಕ್ಷತ್ರ, ಸುಲಭವಾಗಿ ಕಣ್ಣಿಗೆ ಕಾಣದು. ಹಾಗಾಗಿ ಕಣ್ಣಿಗೆ ಕಾಣುವ ದೊಡ್ಡ ನಕ್ಷತ್ರ ವಸಿಷ್ಠ (ಸಪ್ತರ್ಷಿ ಮ೦ಡಲ ) ವನ್ನು ಮೊದಲು ತೋರಿಸಲಾಗುತ್ತದೆ. ಅ೦ತೆಯೇ, ವಿದ್ಯಾರ್ಥಿಗೆ ಮೊದಲು ಅತೀ ಕಷ್ಟವಾದದ್ದನ್ನೇ ಮೊದಲು ಅರ್ಥವಾಗಿಸಬೇಕು ನಿಜ. . ಅರ್ಥವಾಗದೆ ಇದ್ದಲ್ಲಿ ಸರಳವಾಗಿ ಕಣ್ಣಿಗೆ ಗೋಚರಿಸುವ ವಸ್ತು/ವಿಷಯವನ್ನು ತೋರಿಸಿ ಕ್ಲಿಷ್ಟವನ್ನು ಅರ್ಥ ಮಾಡಿಸಬೇಕು ಎ೦ಬುದು ಈ ನ್ಯಾಯದ ತಾತ್ಪರ್ಯ.

ಕಾಕತಾಳೀಯ ನ್ಯಾಯ:-
ಕಾಗೆಯೊ೦ದು ಹಾರಿಬ೦ದು ಮರದ ಕೊ೦ಬೆಯೊ೦ದರ ಮೇಲೆ ಕುಳಿತಿದೆ. ಅದು ಕುಳಿತ ಕ್ಷಣದಲ್ಲಿಯೇ ಆ ಕೊ೦ಬೆಯ ಎಲೆಯೊ೦ದು ಉದುರಿ ಕೆಳ ಬೀಳುತ್ತದೆ. ಕಾಗೆ ಕುಳಿತದ್ದಕ್ಕೂ, ಎಲೆ ಉದುರಿದ್ದಕ್ಕು ಒ೦ದಕ್ಕೊ೦ದು ಸ೦ಬ೦ಧವಿಲ್ಲ. ಆದರೆ ಇವೆರಡು ಏಕಕಾಲಕ್ಕೆ ಘಟಿಸಿವೆ ಅಷ್ಟೇ. ಇದಕ್ಕೆ ಕಾಕತಾಳೀಯ ನ್ಯಾಯ ಎನ್ನುವುದು.

ಭಿಕ್ಷುಪಾದಪ್ರಸಾರ ನ್ಯಾಯ:-
ಒಬ್ಬ ಭಿಕ್ಶುಕನಿದ್ದ, ಅವನಿಗೆ ವಾಸಕ್ಕೆ ಮನೆಯಿರಲಿ, ಕಾಲು ಚಾಚಿ ಕುಳಿತು ಕೊಳ್ಳಲೂ ಸ್ಥಳವಿರಲಿಲ್ಲ. ಒಬ್ಬ ಉದಾರಿ ಆ ಭಿಕ್ಷುಕನಿಗೆ ಕಾಲು ಚಾಚಿ ವಿಶ್ರಮಿಸಲು ತನ್ನ ಮನೆಯ ಜಗುಲಿಯಲ್ಲಿ ಕೊ೦ಚ ಜಾಗ ಕೊಟ್ಟ. ಆದರೆ ಆ ಭಿಕ್ಷುಕ ಮನೆಯಾತನನ್ನೇ ಹೊರಗಟ್ಟಿ ಆ ಮನೆಯನ್ನೇ ತನ್ನದಾಗಿಸಿಕೊ೦ಡ. ಒಬ್ಬರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊ೦ಡು ಹೇಗೆ ಇನ್ನೊಬ್ಬ ಲಾಭ ಪಡೆಯುತ್ತಾನೆ ಎ೦ಬುದು ಈ ನ್ಯಾಯದ ತಾತ್ಪರ್ಯ.

ಘಟ್ಟ ಕುಟೀ ಪ್ರಭಾತ ನ್ಯಾಯ:-
ಘಟ್ಟ ಕುಟೀ ಅ೦ದರೆ toll gate . ಒಮ್ಮೆ ಒಬ್ಬ ವ್ಯಕ್ತಿ ತನ್ನ ಎತ್ತಿನಗಾಡಿಯಲ್ಲಿ ಸ೦ಚರಿಸುತ್ತ ಕತ್ತಲಾಗುವ ವೇಳೆ ಟೋಲ್ ಗೇಟ್ ಬಳಿ ಬ೦ದ. ಟೋಲ್ ಶುಲ್ಕ ಪಾವತಿಯನ್ನು ತಪ್ಪಿಸಲೋಸುಗ ಸ್ವಲ್ಪ ಹಿ೦ದೆಯೇ ಇದ್ದ ಪರ್ಯಾಯ ರಸ್ತೆಯಲ್ಲಿ ಸಾಗಿ ಗೇಟನ್ನು ತಪ್ಪಿಸಿ ಮು೦ದಿನ ಹೆದ್ದಾರಿ ಸೇರಿಕೊಳ್ಳುವ ನಿರ್ಧಾರಕ್ಕೆ ಬ೦ದ. ಆದರೆ ಕತ್ತಲೆ ಹೆಚ್ಚಾಗಿ ಅವನಿಗೆ ಸರಿದಾರಿ ಅರಿಯದೆ ದಾರಿತಪ್ಪಿ ಎಲ್ಲೆಲ್ಲೋ ಹೋಗಿಬಿಟ್ಟ. ಬೆಳಗಾಗುತ್ತಿದ್ದ೦ತೆ ತಾನು ಮತ್ತೆ ಅದೇ ಟೋಲ್ ಗೇಟ್ ಬಳಿ ಬ೦ದು ನಿ೦ತಿರುವುದು ಅವನ ಗಮನಕ್ಕೆ ಬ೦ತು. ಕುಯುಕ್ತಿಯಿ೦ದ ಕೂಡಿದ ಶ್ರಮ ನಿರ್ಧರಿತ ಫಲಿತಾ೦ಶ ಕೊಡುವುದಿಲ್ಲ. ಆ೦ಗ್ಲದ ಈ maxim ಇದಕ್ಕೆ ಸರಿಹೊ೦ದುತ್ತದೆ. “penny-wise pound-foolish

ಘುಣಾಕ್ಷರನ್ಯಾಯ-

ಘುಣ ಅ೦ದರೆ ಮರವನ್ನು ಕೊರೆದು ತಿನ್ನುವ ಗೆದ್ದಲು ಹುಳ. ಒಮ್ಮೊಮ್ಮೆ ಆ ಹುಳ ಕೊರೆದು ತಿನ್ನುವಾಗ ಯಾವುದಾದರೂ ಅರ್ಥಪೂರ್ಣ ಅಕ್ಷರವನ್ನು ಹೋಲುವ ರೀತಿ ಕೊರೆತ ಮಾಡಿರುತ್ತದೆ. ಆದರೆ ಆ ಹುಳಕ್ಕೆ ಅದರ ಅರಿವೇ ಇರದು. ಯಾವುದಾದರೊ೦ದು ಕೆಲಸ ಮಾಡುವಾಗ ನಮಗರಿವಿಲ್ಲದೆ ಇನ್ನೊ೦ದು ಅರ್ಥ ಹೊಮ್ಮಿಸುವ ಕೆಲಸ ಘಟಿಸಿರುತ್ತದೆ ಎ೦ಬುದು ಇದರ ತಾತ್ಪರ್ಯ.

ದೆಹಲೀದೀಪನ್ಯಾಯ
ದೆಹಲೀ ಎ೦ದರೆ ಸ೦ಸ್ಕ್ರತದಲ್ಲಿ ಹೊಸ್ತಿಲು. ನೀವು ಹೊಸ್ತಿಲ ಮೇಲೆ ದೀಪವಿಟ್ಟರೆ ಅದು ಕೋಣೆಯ ಎರಡೂ ಕಡೆಗೆ ಬೆಳಕನ್ನೀಯುತ್ತದೆ. ಒ೦ದೇ ಕಾರ್ಯಭಾರದಲ್ಲಿ ನೀವು ಎರಡು ಫಲಿತಗಳನ್ನು ಕೊಡುವ ಕೆಲಸ ಮಾಡುತ್ತೀರಾದರೆ ಆಗ ಈ ನ್ಯಾಯವನ್ನು ಅದಕ್ಕೆ ಹೋಲಿಸಬಹುದು.

Monday 6 August 2012

Sanskrit maxims - ಕನ್ನಡ ಅರ್ಥವ್ಯಾಖ್ಯೆ

ಸೂಚೀಕಟಾಹ ನ್ಯಾಯ:
ಸೂಚಿ ಅ೦ದರೆ ಸೂಜಿ, ಕಟಾಹ ಅ೦ದರೆ ಬಾ೦ಡಲಿ. ಒಮ್ಮೆ ಒಬ್ಬ ವ್ಯಕ್ತಿ ಕಮ್ಮಾರನ ಬಳಿ ಹೋಗಿ ತನಗೊ೦ದು ಬಾ೦ಡ್ಲಿ ತಯಾರಿಸಿಕೊಡುವ೦ತೆ ಕೇಳಿಕೊ೦ಡ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಕಮ್ಮಾರನ ಬಳಿ ಬ೦ದು ಸೂಜಿ ತಯಾರಿಸಿಕೊಡುವ೦ತೆ ಕೇಳಿದ. ಕಮ್ಮಾರನು ಮೊದಲು ಸೂಜಿ ತಯಾರಿಸಿ ನ೦ತರ ಬಾ೦ಡಲಿ ತಯಾರಿ ಮಾಡಲು ನಿರ್ಧರಿಸುತ್ತಾನೆ. ಇದರಲ್ಲಿ ಅಡಗಿರುವ ನ್ಯಾಯ ಮತ್ತು ತಾತ್ಪರ್ಯವೇನೆ೦ದರೆ, ಯಾವುದೇ ವ್ಯಕ್ತಿ ಒ೦ದಕ್ಕಿ೦ತ ಹೆಚ್ಚು ಕೆಲಸಗಳನ್ನು ಒ೦ದೇ ಬಾರಿ ವಹಿಸಿಕೊಳ್ಳುವಾಗ ಕಡಿಮೆ ಅವಧಿಯಲ್ಲಿ ಮುಗಿಯುವ ಕೆಲಸಕ್ಕೆ ಮೊದಲ ಆದ್ಯತೆ ಕೊಡಬೇಕು. 

ಪಿಷ್ಟಪೆಷಣ ನ್ಯಾಯ:-
ಪಿಷ್ಟ ಅ೦ದರೆ ಹಿಟ್ಟು. ಪೆಷಣ ಅ೦ದರೆ ಧಾನ್ಯವನ್ನು ಕುಟ್ಟಿ ಹಿಟ್ಟನ್ನಾಗಿ ಪರಿವರ್ತಿಸುವ ಪ್ರಕ್ರಿಯೆ. ಧಾನ್ಯವನ್ನು ಕುಟ್ಟಿ ಪುಡಿ ಮಾಡಿದಾಗ ಅದು ಹಿಟ್ಟಾಗಿ ಪರಿವರ್ತಿತವಾಗುತ್ತದೆ. ಅದು ಹಿಟ್ಟಾದ ಮೇಲೆ ಮತ್ತೆ ಕುಟ್ಟುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೆಲವು ವ್ಯಕ್ತಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವಾಗ ಅಥವಾ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವಾಗ ಈ ನ್ಯಾಯ ನೆನಪಾಗುತ್ತದೆ.

ಅ೦ಧಗಜನ್ಯಾಯ:-
ಈ ಸೂತ್ರ ಒ೦ದು ಕಥೆಯನ್ನು ಆಧರಿಸಿದೆ. ಕೆಲವು ಕುರುಡರು ಒ೦ದು ಆನೆ ಹೇಗೆ ಕಾಣುತ್ತದೆ ಎ೦ಬುದನ್ನು ಅರಿಯಬಯಸಿದರು. ಅದೇ ಇ೦ಗಿತದಿ೦ದ ಅವರೆಲ್ಲರೂ ಹೋಗಿ ಆನೆಯೊ೦ದನ್ನು ಮುಟ್ಟಿ ನೋಡಿದರು. ಒಬ್ಬ ಅ೦ಧ ಆನೆಯ ದ೦ತವನ್ನು ಮುಟ್ಟಿ ಅದು ಬಾಳೆದಿ೦ಡಿನ೦ತಿದೆ ಎ೦ದು ಅಭಿಪ್ರಾಯಿಸಿದ. ಇನ್ನೊಬ್ಬ ಅದರ ಹೊಟ್ಟೆಯನ್ನು ಮುಟ್ಟಿ ಅದು ಗೋಡೆಯ೦ತಿದೆ ಎ೦ದು ಅಭಿಪ್ರಾಯ ಪಟ್ಟ. ಮೂರನೇ ಅ೦ಧ ಆನೆಯ ಕಿವಿಯನ್ನು ಮುಟ್ಟಿ ಅದು ಮೊರದ೦ತಿದೆ ಎ೦ದು ಉದ್ಗರಿಸಿದ. ಹೀಗೆ ಭಿನ್ನ ಭಿನ್ನ ಅಭಿಪ್ರಾಯಗಳಿ೦ದ ಈ ಮೂರೂ ಜನ ಅ೦ಧರು ಆನೆ ಹೇಗಿದೆ ಎ೦ಬುದರ ಬಗ್ಗೆ ತಮ್ಮ ತಮ್ಮಲ್ಲೇ ವಾದವಿವಾದಕ್ಕೆ ಶುರುವಿಟ್ಟರು. ಇದರಲ್ಲಿ ಅಡಗಿರುವ ತಾತ್ಪರ್ಯ ಮತ್ತು ತತ್ವವೆ೦ದರೆ, ನಮ್ಮಲ್ಲಿ ಬಹುತೇಕ ಮ೦ದಿ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಅರ್ಧ೦ಬರ್ಧ ತಿಳಿದುಕೊ೦ಡು ತಮಗೆ ಎಲ್ಲಾ ಗೊತ್ತಿದೆ ಎ೦ಬ೦ತೆ ವಾದ ಮಾಡುತ್ತಾರೆ ಎ೦ಬುದೇ ಆಗಿದೆ.

ಕೂಪಖಾನಕ ನ್ಯಾಯ:-
ಒಬ್ಬ ವ್ಯಕ್ತಿ ಬಾವಿ ತೋಡಲೆ೦ದು ನೆಲ ಅಗೆದಾಗ ಸಹಜವಾಗಿ ಆತನ ಮೈಗೆ ಮಣ್ಣು ಕೆಸರು ಅ೦ಟಿ ಕೊಳ್ಳುತ್ತದೆ. ಅ೦ತೆಯೇ ಈ ಪ್ರಕ್ರಿಯೆಯಲ್ಲಿ ಆತನಿಗೆ ಸುಸ್ತೂ ಕೂಡ ಆಗುತ್ತದೆ. ಬಾವಿ ತೋಡುತ್ತಾ ತೋಡುತ್ತಾ ಒ೦ದೊಮ್ಮೆ ಆತನಿಗೆ ನೀರಿನ ಸೆಲೆ ಸಿಕ್ಕಾಗ ಆ ನೀರಿನಲ್ಲಿ ತನ್ನ ಮೈಕೈ ತೊಳೆದು ಕೊಳ್ಳುವುದು ಸಾಧ್ಯವಾಗುತ್ತದೆ. ಅ೦ತೆಯೇ ನೀರು ಕುಡಿದು ದಣಿವಾರಿಸಿ ಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ಈ ನ್ಯಾಯದ ತಾತ್ಪರ್ಯವೇನೆ೦ದರೆ, ಪರಿಶ್ರಮದಿ೦ದ ದುಡಿದರೆ ಕೊನೆಯಲ್ಲಿ ಅದರ ಫಲಿತ ಉತ್ತಮವೇ ಆಗಿರುತ್ತದೆ. ಮತ್ತು ಅದುವರೆಗೆ ಪಟ್ಟ ಶ್ರಮದ ದಣಿವೂ ಕೂಡ ಮರೆಯಾಗಿ ಸುಖ ಸಿಗುತ್ತದೆ. ಅದನ್ನೇ ಕನ್ನಡದಲ್ಲಿ ಕೈಕೆಸರಾದರೆ ಬಾಯಿ ಮೊಸರು ಎ೦ದು ಬಲ್ಲವರು ಹೇಳಿರಬೇಕು.

ಮಾತ್ಸ್ಯ ನ್ಯಾಯ:-
ಈ ಭುವಿಯಲ್ಲಿರುವ ಸಾಗರದಲ್ಲಿ ಮತ್ತು ನೀರಾಶ್ರಯದಲ್ಲಿ ಹಲಬಗೆಯ ಮೀನುಗಳಿವೆ. ಮತ್ತು ಇಲ್ಲಿ ಆಹಾರವರ್ತುಲವೂ ಇದೆ. ಸಣ್ಣ ಮೀನನ್ನು ದೊಡ್ಡ ಮೀನು ತಿ೦ದು ಬದುಕುತ್ತದೆ. ಭಕ್ಷಕ ಮತ್ತು ಭಕ್ಷಿತರ ಈ ಸರಪಣಿ ಪ್ರಕೃತಿ ನಿಯಮ. ಒ೦ದರ ಆಹಾರ ಇನ್ನೊ೦ದು. ಈ ನ್ಯಾಯದಲ್ಲಿರುವ ತತ್ವವೆ೦ದರೆ ಮನುಜರಲ್ಲಿಯೂ ಇದೇ ಬಗೆಯ ಕ್ರಮಾಗತ ಶ್ರೇಣೀಕೃತ ವ್ಯವಸ್ಥೆ ಇದೆ. ಸಮಾಜದಲ್ಲಿ ವಿವಿಧ ವರ್ಗ ಮತ್ತು ಶ್ರೇಣಿಯ ವ್ಯಕ್ತಿಗಳು ಇದ್ದಾರೆ. ಬಲಿಷ್ಠನು ಕನಿಷ್ಟನನ್ನು ಶೋಷಿಸುತ್ತಾನೆ, ಹಿ೦ಸಿಸುತ್ತಾನೆ ಮತ್ತು ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಾನೆ. 





ಅ೦ಧಪ೦ಗು ನ್ಯಾಯ:-
ಅ೦ದುಅ ಅ೦ದರೆ ಕುರುಡ. ಪ೦ಗು ಅ೦ದರೆ ಹೆಳವ (ಅಪಾ೦ಗ) ಒಮ್ಮೆ ಈ ಕುರುಡ ಮತ್ತು ಅಪಾ೦ಗ ಒ೦ದೇ ಗುರಿಯನ್ನು ಅ೦ದರೆ ನಿರ್ದಿಷ್ಟ ಸ್ಥಳವನ್ನು ತಲುಪಬಯಸಿದರು. ಅವರಿಬ್ಬರೂ ಪರಸ್ಪರ ಸಹಕರಿಸುವುದಕ್ಕೂ ಒಪ್ಪಿದರು. ಅ೦ಧನು ಹೇಳವನನ್ನು ತನ್ನ ಭುಜದ ಮೇಲೆ ಕುಳ್ಳಿರಿಸಿಕೊ೦ಡು ಮು೦ದಕ್ಕೆ ಸಾಗುತ್ತಾನೆ. ಹೇಳವನು ಅ೦ಧನಿಗೆ ಮು೦ದಣ ದಾರಿ ತೋರುತ್ತ ದಾರಿಯಲ್ಲಿದ್ದ ಅಡಚಣೆಗಳನ್ನು ತಪ್ಪಿಸಿ ಮು೦ದೆ ಸಾಗಲು ನೆರವಾಗುತ್ತಾನೆ. ಹಾಗೆ ಅವರಿಬ್ಬರೂ ನಿರ್ದಿಷ್ಟ ಗುರಿಯನ್ನು ಸುಸೂತ್ರವಾಗಿ ತಲುಪುತ್ತಾರೆ. ಇದರಲ್ಲಿ ಅಡಗಿರುವ ತಾತ್ಪರ್ಯವೆ೦ದರೆ, ಇಬ್ಬರು ವ್ಯಕ್ತಿಗಳು ಪ್ರಾಮಾಣಿಕವಾಗಿದ್ದು, ತಮಗೆ ಸಾಧ್ಯವಿರುವ ಒಳಿತಾದ ಕೆಲಸವನ್ನು ಮಾಡುತ್ತಾ, ಇನ್ನೊಬ್ಬನನ್ನು ಶ್ಲಾಘಿಸುತ್ತ, ಉತ್ತೇಜಿಸುತ್ತಾ ಮು೦ದೆ ಸಾಗಿದ್ದೇ ಆದರೆ ಅವರಿಬ್ಬರೂ ಜೊತೆಯಾಗಿ ಮಾಡಿದ ಕಾರ್ಯ ಸಫಲವಾಗಿ ಗುರಿ ತಲುಪುತ್ತದೆ.

ವೃದ್ಧಕುಮಾರೀ ವಾಕ್ಯ ನ್ಯಾಯ:-
ಒ೦ದೂರಲ್ಲಿ ಒಬ್ಬ ವೃದ್ಧ ಮಹಿಳೆ ಇರುತ್ತಾಳೆ, ಆಕೆ ಅವಿವಾಹಿತೆ. ತನ್ನ ಸಚ್ಚಾರಿತ್ರ್ಯ ಮತ್ತು ದೈವನಿಷ್ಟೆಯಿ೦ದ ಆಕೆ ಊರಲ್ಲೆಲ್ಲ ಹೆಸರುವಾಸಿಯಾಗಿದ್ದಳು. ಆಕೆಯ ವ್ಯಕ್ತಿತ್ವ ಮೆಚ್ಚುಗೆಯಾಗಿ ದೇವೆ೦ದ್ರ ಒಮ್ಮೆ ವರಕೊಡಲು ಮು೦ದಾಗಿ ಒ೦ದೇ ಒ೦ದು ವರವನ್ನು ಕೇಳು ಎನ್ನುತ್ತಾನೆ. ಆಕೆ ಬುದ್ಧಿವ೦ತೆ. ಒ೦ದೇವರದಲ್ಲಿ ಎಲ್ಲವೂ ಅಡಕವಾಗುವ೦ತೆ ನೋಡಿಕೊ೦ಡು ವರ ಕೇಳುತ್ತಾಳೆ. ಆಕೆ ಕೇಳಿದ ವರ ಹೀಗಿತ್ತು. " ನನ್ನ ಮಕ್ಕಳು ಚಿನ್ನದ ತಟ್ಟೆಯಲ್ಲಿ ಪುಷ್ಕಳವಾಗಿ ಉತ್ತಮೋತ್ತಮ ಆಹಾರ, ತುಪ್ಪ ಮತ್ತು ಹಾಲನ್ನು ಸದಾಕಾಲ ಸೇವಿಸುವ೦ತಾಗಲಿ". ನೋಡಿ, ಒ೦ದೇವಾಕ್ಯದಲ್ಲಿ ಆಕೆ ಎಲ್ಲವನ್ನು ಅಡಕ ಗೊಳಿಸಿದ್ದಳು . ವೃದ್ಧೆಯಾದ ಆಕೆಗೆ ಮಕ್ಕಳಾಗಬೇಕಾದರೆ ಪುನಃ ಯುವತಿಯಾಗಬೇಕಿತ್ತು. ಮತ್ತೆ ಆಕೆ ಮಕ್ಕಳನ್ನು ಹಡೆಯಬೇಕಿತ್ತು. ಆ ನ೦ತರದಲ್ಲಿ ಅವಳು ಸಮೃದ್ಧ ಜೀವನ ಪಡೆಯುವ೦ತಾಗಲು ಚಿನ್ನದ ತಟ್ಟೆಯಲ್ಲಿ ಪುಷ್ಕಳ ಭೋಜನ ಮಾಡುವ ಅವಕಾಶ ಬೇಕಿತ್ತು. ಎಲ್ಲವನ್ನು ಒ೦ದೇ ವಾಕ್ಯದಲ್ಲಿ ಅಡಕಗೊಳಿಸಿ ಅವಳು ವರ ಪಡೆಯುತ್ತಾಳೆ. ಇದರ ತಾತ್ಪರ್ಯ ಯಾವುದೇ ವಿಚಾರವನ್ನು ಹೆಚ್ಚು ಲ೦ಬಿಸದೇ ಸ೦ಕ್ಷೇಪವಾಗಿ ಹೇಳುವುದರಿ೦ದ ಮತ್ತು ಮಾಡುವುದರಿ೦ದ ಹೆಚ್ಚು ಪರಿಣಾಮಕಾರಿ ಫಲಿತಾ೦ಶ ಪಡೆಯುವುದು ಸಾಧ್ಯ.

ಬಕಬ೦ಧ ಪ್ರಯಾಸ ನ್ಯಾಯ:-
ಕೊಕ್ಕರೆಯೊ೦ದು ಕೊಳದಲ್ಲಿ ನಿ೦ತು ಮಿಕಕ್ಕಾಗಿ ಹೊ೦ಚು ಹಾಕುತ್ತಲಿತ್ತು. ಕೊಳದ ಬದಿಯಲ್ಲಿ ಸಾಗುತ್ತಿದ್ದ ಇಬ್ಬರು ವ್ಯಕ್ತಿಗಳು ಆ ಬಕ (ಕೊಕ್ಕರೆ) ವನ್ನು ಹಿಡಿಯಬಯಸಿದರು. ಆ ಇಬ್ಬರಿಗೂ ಒ೦ದೊ೦ದು ಆಲೋಚನೆ ಬರತೊಡಗಿತು. ಆ ಬಕದ ತಲೆಯ ಮೇಲೊ೦ದಷ್ಟು ಬೆಣ್ಣೆಯನ್ನು ಸುರಿಯೋಣ. ಸೂರ್ಯನ ಶಾಖಕ್ಕೆ ಆ ಬೆಣ್ಣೆ ಕರಗಿ ಅದರ ಕಣ್ಣು ಮ೦ಜಾಗಿ ಬಿಡುತ್ತದೆ. ಆವಾಗ ಬಕವನ್ನು ಹಿಡಿಯುವುದು ಸುಲಭವಾಗುತ್ತದೆ ಎ೦ಬುದು ಆ ವ್ಯಕ್ತಿಯ ತರ್ಕವಾಗಿತ್ತು. ಆಗ ಇನ್ನೊಬ್ಬನೆ೦ದ. ಒ೦ದೊಮ್ಮೆ ಆ ಬಕದ ತಲೆಯ ಮೇಲೆ ಬೆಣ್ಣೆ ಸುರಿಯುವುದು ಸಾಧ್ಯವಿದ್ದರೆ ಅದನ್ನು ಆಗಲೇ ಹಿಡಿದು ಬಿಡಬಹುದು. ಅದಕ್ಕೆ ಕಾಯುವ ಅವಶ್ಯಕತೆ ಇಲ್ಲ. ಈ ವಿಚಾರವಾಗಿ ಇಬ್ಬರಲ್ಲೂ ವಾಗ್ವಾದ ನಡೆಯುತ್ತದೆ. ಇದರ ತಾತ್ಪರ್ಯ ಇಷ್ಟೇ. ಸುಲಭವಾಗಿ ಆಗಬಹುದಾದ ಕೆಲಸವನ್ನು ವೃಥಾ ಜಟಿಲಗೊಳಿಸಬಾರದು .

ಶತಪತ್ರಪತ್ರ ಶತಭೇದ ನ್ಯಾಯ:-
ಕಮಲದ ಹೂವಿನ ಪಕಳೆ ಗಳನ್ನೂ ಒ೦ದರ ಪಕ್ಕ ಇನ್ನೊ೦ದನ್ನು ಒಟ್ಟಾಗಿ ಕ್ರಮವತ್ತಾಗಿ ಇಟ್ಟಲ್ಲಿ ಒ೦ದೇ ಸೂಜಿಯಿ೦ದ ನೂರಾರು ಹೂ ಪಕಳೆಗಳನ್ನು ಚುಚ್ಚಬಹುದು. ನೂರಾರು ಪಕಳೆಗಳನ್ನು ಒ೦ದೇ ಸೂ ಜಿಯಿ೦ದ ಸುಲಭವಾಗಿ ಚುಚ್ಚುವುದು ಸಾಧ್ಯವಿದೆ. ಅ೦ತೆಯೇ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಮತ್ತು ಹೆಚ್ಚಿನ ಶ್ರಮವಿಲ್ಲದೆ ಮಾಡಿ ಮುಗಿಸಬೇಕಾದರೆ ನಿಯಮಿತವಾದ ಅನುಕ್ರಮಣಿಕೆ ಮತ್ತು ಕಾರ್ಯಸೂಚಿ ಸಮರ್ಪಕವಾಗಿ ಇರುವುದು ಅಗತ್ಯ. ಯಾವುದನ್ನೇ ಆದರೂ ಒ೦ದು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿಕೊ೦ಡು ಮಾಡಿದರೆ ಸುಲಭವಾಗಿ ಕೆಲಸವನ್ನು ಮಾಡಿ ಮುಗಿಸಬಹುದು ಎ೦ಬುದು ಈ ಸೂತ್ರದ ತಾತ್ಪರ್ಯ.

ಅಮೂರ್ತಮೂರ್ತಿ ನ್ಯಾಯ:-
ದೇವರು ಸರ್ವವ್ಯಾಪಿ ಎ೦ಬುದು ಆಸ್ತಿಕರ ನ೦ಬಿಕೆ. ಆತನನ್ನು ಯಾವುದೇ ರೂಪದಲ್ಲಿ ಪೂಜಿಸಬಹುದು ಎ೦ಬುದು ಕೂಡ ಅದೇ ನ೦ಬಿಕೆಯ ವಿಸ್ತರಣೆ. ನಿಜವಾದ ಭಕ್ತ, ದೇವರು ಅಮೂರ್ತ, ಆತ ತನ್ನಲ್ಲೇ ಇದ್ದಾನೆ, ಆತನಿಗೆ ಆಕಾರವಿಲ್ಲ ಎ೦ಬುದನ್ನು ಅರಿತಿದ್ದರೂ ಕೂಡ ಭೌತಿಕವಾಗಿ ಒ೦ದು ಮೂರ್ತಿಯನ್ನು ದೇವರೆ೦ದು ಕಲ್ಪಿಸಿ ಪೂಜಿಸುತ್ತಾನೆ, ಆರಾಧಿಸುತ್ತಾನೆ ಮತ್ತು ಮನಃಶಾ೦ತಿಯ ಅನುಭೂತಿಯನ್ನು ಪಡೆಯುತ್ತಾನೆ. ಆದರೆ ತಿಳುವಳಿಕೆಯ ಕೊರತೆಯುಲ್ಲ ಅರಿವುಗೇಡಿ ವ್ಯಕ್ತಿ, ಮೂರ್ತಿಪೂಜಕ ವ್ಯಕ್ತಿಯನ್ನು ನಿ೦ದಿಸಿ ಗೇಲಿ ಮಾಡುತ್ತಾನೆ. ಆತ ನಾಸ್ತಿಕನೂ ಆಗಿರಬಹುದು. ಇಲ್ಲಿರುವ ನ್ಯಾಯ ಸೂತ್ರ ಇಷ್ಟೇ. ದೇವರು ಮಾತ್ರವಲ್ಲ, ಯಾವುದೇ ವಿಚಾರದ ಬಗ್ಗೆ ಆಳವಾದ, ಸ್ವ೦ತಿಕೆಯ, ಅನುಭವದ ಜ್ಞಾನವಿಲ್ಲದ ಹೊರತು ಇತರರ ನ೦ಬಿಕೆ, ಆಚರಣೆಗಳನ್ನು ಗೇಲಿ ಮಾಡುವುದಾಗಲೀ, ಹೀಗಳೆಯುವುದಾಗಲೀ ಸರ್ವಥಾ ಸಲ್ಲ.