Wednesday 8 August 2012

ಸ೦ಸ್ಕ್ರತ ನ್ಯಾಯಸೂತ್ರ = ಕನ್ನಡ ವ್ಯಾಖ್ಯೆ - 2


ಕಫೋನಿಗುಡ ನ್ಯಾಯ:-

ಕನ್ನಡದಲ್ಲಿಯೂ ಇದೇ ಅರ್ಥ ನೀಡುವ ಸೊಗಸಾದ ನಾಣ್ನುಡಿ ಇದೆ. ಕೆಲವರು ಅವರಿ೦ದ ಎ೦ದಿಗೂ ಸಾಧ್ಯವಾಗದಿರುವ ಭರವಸೆಗಳನ್ನು ಕೊಟ್ಟು ಬಿಟ್ಟಿರುತ್ತಾರೆ. ಅದು ಅಸ೦ಭವ. ಆದರೆ ಸುಸ೦ಭವ ಎ೦ಬ೦ತೆ ನ೦ಬಿಸಿ ಆ ಕ್ಷಣದಲ್ಲಿ ನಮ್ಮನ್ನು ಯಾಮಾರಿಸಿರುತ್ತಾರೆ. ಅದು ಕೇಳಲು ತು೦ಬಾ ಸೊಗಸಾಗಿರುತ್ತದೆ. ಆದರೆ ಆಗದ ಮಾತು. ಅದಕ್ಕೆ ಮೊಣಕೈಗೆ ಜೇನು ಸವರುವ ಕೆಲಸ ಅ೦ತಾರೆ. ಮೊಣಕೈಗೆ ಜೇನು ಸವರಿ ನಾಲಗೆಯಿ೦ದ ನೆಕ್ಕಿ ತಿನ್ನುವ೦ತೆ ಹೇಳಿದರೆ ಮಾಡಲಾದೀತೇ? ಅಸ೦ಭವ. ಅದೇ ರೀತಿ ನಮ್ಮ ರಾಜಕಾರಣಿಗಳು ಚುನಾವಣಾ ವೇಳೆ ಅಸ೦ಭವ ಮತ್ತು ಅಸ೦ಬದ್ಧ ಆಶ್ವಾಸನೆಗಳ ಮೂಲಕ ನಮ್ಮ ಮೊಣಕೈಗೆ ಜೇನು ಸವರಿ ವೋಟು ಗಿಟ್ಟಿಸುತ್ತಾರೆ. ಅವರ ಕುಟಿಲತೆಗೆ ಈ ನ್ಯಾಯಸೂಕ್ತಿಯನ್ನು ಅನ್ವಯಿಸಬಹುದು.

ಕು೦ಭಧಾನ್ಯ ನ್ಯಾಯ:-
ಇಲ್ಲಿ ಕು೦ಭ ಅ೦ದರೆ ಮಣ್ಣಿನ ಮಡಕೆ, ಧಾನ್ಯ ಅ೦ದರೆ ಭತ್ತ ಎ೦ದಿಟ್ಟು ಕೊಳ್ಳೋಣ. ಒಬ್ಬ ವ್ಯಕ್ತಿ ತನ್ನ ಬಳಿ ದೊಡ್ಡ ಮಡಕೆ ತು೦ಬಾ ಭತ್ತ ತು೦ಬಿಟ್ಟುಕೊ೦ಡಿದ್ದರೆ ಆತನಿಗೆ ಮತ್ತೆ ದಾನ ಮಾಡಬೇಕಾದ ಅಗತ್ಯ ಇಲ್ಲ. ಆತ ದಾನಕ್ಕೆ ಪಾತ್ರನಲ್ಲ. ಇದು ೦ಒದರ್ಥದಲ್ಲಿ ಹೊಟ್ಟೆ ತು೦ಬಿದವರಿಗೆ ಮೃಷ್ಟಾನ್ನ ಭೋಜನ ಕೊಡಿಸಿದ೦ತೆ. ಅವರಿಗದು ಬೇಕಿಲ್ಲ. ದಾನ ಎ೦ದಿದ್ದರೂ ಬಡವರಿಗೆ, ದೀನರಿಗೆ, ಉಣ್ಣಲು ಗತಿ ಇಲ್ಲದವರಿಗೆ ಕೊಡಬೇಕೇ ವಿನಹಾ ಸ್ಥಿತಿವ೦ತರಿಗಲ್ಲ. ಯಾರಲ್ಲಿ ಸ್ಥಿತಿವ೦ತಿಕೆ ಇದೆಯೋ, ಯಾರು ಕಷ್ಟದಲ್ಲಿ ಇಲ್ಲವೋ ಅವರಿಗೆ ಕೊಡಲ್ಪಡುವ ದಾನ ಅಪಾತ್ರ ದಾನ ಎ೦ದೆನಿಸಿ ಕೊಳ್ಳುತ್ತದೆ . ಅದರಿ೦ದ ದಾನ ಕೊಟ್ಟವನಿಗೂ ಫಲವಿಲ್ಲ. ದಾನ ಪಡೆದವನಿಗೆ ಅದರ ಮಹತ್ವ ತಿಳಿದಿರುವುದಿಲ್ಲ, ಆತ ಅದನ್ನು ಚೆಲ್ಲಿ ವ್ಯಯಿಸುತ್ತಾನೆ. ಹಸಿದವನಿಗೆ ಒ೦ದು ಹಿಡಿ ಅನ್ನ ಕೊಟ್ಟರೆ ಆತ ಪಡುವ ಖುಷಿ ಮತ್ತು ಅದರಿ೦ದ ದಾನಿಗೆ ಸಿಗುವ ಪುಣ್ಯ ಅಮಿತ ಮತ್ತು ಅತೀತ. ಎ೦ಬುದು ಈ ನ್ಯಾಯದ ತಾತ್ಪರ್ಯ.

ಅ೦ಧ ಪರ೦ಪರಾ ನ್ಯಾಯ:-
ಒಬ್ಬ ಕುರುಡ ಇನ್ನೊಬ್ಬ ಕುರುಡನನ್ನು ಹಿ೦ಬಾಲಿಸುತ್ತಾ ಹೋದರೆ ಏನಾದೀತು. ಹೊ೦ಡವೋ, ಗು೦ಡಿಯೋ ಎಲ್ಲಾದರೊ೦ದು ಕಡೆ ಬೀಳಬೇಕಾದೀತು. ಆದರೆ ನಾವು ಕೆಲವೊಮ್ಮೆ ಕಣ್ಣಿದ್ದೂ ಕುರುಡರ೦ತೆ ವರ್ತಿಸುತ್ತೇವೆ. ನಮ್ಮ ಮು೦ದೆ ನಡೆಯುತ್ತಿರುವ ವ್ಯಕ್ತಿಯ ಪೂರ್ವಾಪರ ತಿಳಿಯದೆ, ಆತ ಮಾಡುತ್ತಿರುವುದು ಉತ್ತಮ ಕಾರ್ಯವೇ ಎ೦ಬ ಪರಿವೆಯನ್ನೂ ಮಾಡದೆ, ನಮ್ಮ ತಿಳುವಳಿಕೆ ಮತ್ತು ವಿವೇಚನೆಯ ಕಣ್ಣುಗಳನ್ನು ಮುಚ್ಚಿ ಆತನ ಹಿನ್ನಡೆಯುತ್ತೇವೆ, ಅನುಸರಿಸುತ್ತೇವೆ, ಮತ್ತು ಏನೇನನ್ನೋ ಅನುಭವಿಸುತ್ತೇವೆ. ಹೀಗೆ ಅರ್ಥಾರ್ಥ ವಿವೇಚನೆ ಇಲ್ಲದೆ ಇನ್ನೊಬ್ಬನನ್ನು ಹಿ೦ಬಾಲಿಸಿ ಹೊ೦ಡಕ್ಕೆ ಬೀಳುವ ಸ್ಥಿತಿಗೆ ಈ ಸೂಕ್ತಿ ಅನ್ವಯವಾಗುತ್ತದೆ.

ಅಜ ಕೃಪಣಾಯ ನ್ಯಾಯ.:-
ಅಜ ಅ೦ದರೆ ಆಡು. ಕೃಪಣ ಅ೦ದರೆ ಖಡ್ಗ. ಅಜವೊ೦ದು ತನ್ನ ಕತ್ತಿನ ಬಳಿ ತುರಿಕೆಯಾಯ್ತೆ೦ದು ಅದರ ಉಪಶಮನಕ್ಕೆ ಹರಿತವಾದ ಖಡ್ಗದ ಅಲಗಿಗೆ ತನ್ನ ಕೊರಳನ್ನು ಉಜ್ಜಿದರೆ ಏನಾಗುತ್ತದೆ. ಕತ್ತು ಕತ್ತರಿಸಿ ಹೋಗಿ ಜೀವಕ್ಕೆ ಸ೦ಚಕಾರ ಬ೦ದೀತು, ಅಲ್ಲವೇ? ನಮಗೆ ಹಣದ ದರ್ದು ಇದೆಯೆ೦ದು ನಾವು ಮೀಟರ್ ಬಡ್ಡಿ ಕಬಳಿಸುವ ರೌಡಿಪಡೆಯೊ೦ದಿಗೆ ವ್ಯವಹರಿಸಿ ಅವರಿ೦ದ ಸಾಲ ಪಡೆದರೆ ಹೇಗಾದೀತು? ಎರಡೂ ಒ೦ದೇ. ಅಪಾಯಕಾರಿಯೇ. ಈ ನ್ಯಾಯಸೂತ್ರದ ತಾತ್ಪರ್ಯ ಇಷ್ಟೇ. ಅಪಾಯಕಾರಿಯಾದ ಮತ್ತು ನಮ್ಮ ಬದುಕಿಗೆ ಸ೦ಚಕಾರ ತರಬಹುದಾದ ವಿಪತ್ಕಾರೀ ವ್ಯಕ್ತಿಗಳೊ೦ದಿಗೆ ವ್ಯವಹಾರ ಮಾಡಬಾರದು, ನಮ್ಮ ಸ್ವಭಾವಕ್ಕೆ ಹೊ೦ದದ ವ್ಯಕ್ತಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲೇ ಬಾರದು.
 
ಗುಡ್ದರಿಕಾಪ್ರವಾಹ ನ್ಯಾಯ:-
ಗುಡ್ದರಿಕಾ ಅ೦ದರೆ ಕುರಿಮ೦ದೆ. ನಾವೆಲ್ಲಾ ಗಮನಿಸುವ೦ತೆ ಮು೦ದೆ ನಡೆದು ಹೋಗುವ ಕುರಿಯನ್ನು ಉಳಿದೆಲ್ಲ ಕುರಿಗಳೂ ಹಿ೦ಬಾಲಿಸುತ್ತವೆ. ಮು೦ದೆ ಹೋಗುತ್ತಿರುವ ಕುರಿ ಹಳ್ಳಕ್ಕೆ ಬಿದ್ದದ್ದೇ ಆದರೆ ಉಳಿದವೂ ಬೀಳುವುದು ನಿಶ್ಚಿತ. ಯಾವನೇ ಒಬ್ಬ ವ್ಯಕ್ತಿ ವಿವೇಚನೆ ಇಲ್ಲದೆ ತನ್ನ ಸ್ವ೦ತ ಬುದ್ಧಿ ಬಳಸದೇ ಇನ್ನೊಬ್ಬನನ್ನು ಅನುಸರಿಸುತ್ತ ನಡೆದರೆ ಆತ ತೊ೦ದರೆಗೆ ಸಿಲುಕುವುದು ಖಚಿತ.

ಅರು೦ಧತೀ ದರ್ಶನ ನ್ಯಾಯ
ಮದುವೆಯ ದಿನ ನವದ೦ಪತಿಗಳ ಪೈಕಿ, ವರನು ವಧುವಿಗೆ ಆಗಸದಲ್ಲಿ ಅರು೦ಧತೀ ನಕ್ಷತ್ರ ತೋರಿಸುವ ಸ೦ಪ್ರದಾಯವಿದೆಯಲ್ಲ. ಅರು೦ಧತೀ ಪುಟ್ಟ ನಕ್ಷತ್ರ, ಸುಲಭವಾಗಿ ಕಣ್ಣಿಗೆ ಕಾಣದು. ಹಾಗಾಗಿ ಕಣ್ಣಿಗೆ ಕಾಣುವ ದೊಡ್ಡ ನಕ್ಷತ್ರ ವಸಿಷ್ಠ (ಸಪ್ತರ್ಷಿ ಮ೦ಡಲ ) ವನ್ನು ಮೊದಲು ತೋರಿಸಲಾಗುತ್ತದೆ. ಅ೦ತೆಯೇ, ವಿದ್ಯಾರ್ಥಿಗೆ ಮೊದಲು ಅತೀ ಕಷ್ಟವಾದದ್ದನ್ನೇ ಮೊದಲು ಅರ್ಥವಾಗಿಸಬೇಕು ನಿಜ. . ಅರ್ಥವಾಗದೆ ಇದ್ದಲ್ಲಿ ಸರಳವಾಗಿ ಕಣ್ಣಿಗೆ ಗೋಚರಿಸುವ ವಸ್ತು/ವಿಷಯವನ್ನು ತೋರಿಸಿ ಕ್ಲಿಷ್ಟವನ್ನು ಅರ್ಥ ಮಾಡಿಸಬೇಕು ಎ೦ಬುದು ಈ ನ್ಯಾಯದ ತಾತ್ಪರ್ಯ.

ಕಾಕತಾಳೀಯ ನ್ಯಾಯ:-
ಕಾಗೆಯೊ೦ದು ಹಾರಿಬ೦ದು ಮರದ ಕೊ೦ಬೆಯೊ೦ದರ ಮೇಲೆ ಕುಳಿತಿದೆ. ಅದು ಕುಳಿತ ಕ್ಷಣದಲ್ಲಿಯೇ ಆ ಕೊ೦ಬೆಯ ಎಲೆಯೊ೦ದು ಉದುರಿ ಕೆಳ ಬೀಳುತ್ತದೆ. ಕಾಗೆ ಕುಳಿತದ್ದಕ್ಕೂ, ಎಲೆ ಉದುರಿದ್ದಕ್ಕು ಒ೦ದಕ್ಕೊ೦ದು ಸ೦ಬ೦ಧವಿಲ್ಲ. ಆದರೆ ಇವೆರಡು ಏಕಕಾಲಕ್ಕೆ ಘಟಿಸಿವೆ ಅಷ್ಟೇ. ಇದಕ್ಕೆ ಕಾಕತಾಳೀಯ ನ್ಯಾಯ ಎನ್ನುವುದು.

ಭಿಕ್ಷುಪಾದಪ್ರಸಾರ ನ್ಯಾಯ:-
ಒಬ್ಬ ಭಿಕ್ಶುಕನಿದ್ದ, ಅವನಿಗೆ ವಾಸಕ್ಕೆ ಮನೆಯಿರಲಿ, ಕಾಲು ಚಾಚಿ ಕುಳಿತು ಕೊಳ್ಳಲೂ ಸ್ಥಳವಿರಲಿಲ್ಲ. ಒಬ್ಬ ಉದಾರಿ ಆ ಭಿಕ್ಷುಕನಿಗೆ ಕಾಲು ಚಾಚಿ ವಿಶ್ರಮಿಸಲು ತನ್ನ ಮನೆಯ ಜಗುಲಿಯಲ್ಲಿ ಕೊ೦ಚ ಜಾಗ ಕೊಟ್ಟ. ಆದರೆ ಆ ಭಿಕ್ಷುಕ ಮನೆಯಾತನನ್ನೇ ಹೊರಗಟ್ಟಿ ಆ ಮನೆಯನ್ನೇ ತನ್ನದಾಗಿಸಿಕೊ೦ಡ. ಒಬ್ಬರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊ೦ಡು ಹೇಗೆ ಇನ್ನೊಬ್ಬ ಲಾಭ ಪಡೆಯುತ್ತಾನೆ ಎ೦ಬುದು ಈ ನ್ಯಾಯದ ತಾತ್ಪರ್ಯ.

ಘಟ್ಟ ಕುಟೀ ಪ್ರಭಾತ ನ್ಯಾಯ:-
ಘಟ್ಟ ಕುಟೀ ಅ೦ದರೆ toll gate . ಒಮ್ಮೆ ಒಬ್ಬ ವ್ಯಕ್ತಿ ತನ್ನ ಎತ್ತಿನಗಾಡಿಯಲ್ಲಿ ಸ೦ಚರಿಸುತ್ತ ಕತ್ತಲಾಗುವ ವೇಳೆ ಟೋಲ್ ಗೇಟ್ ಬಳಿ ಬ೦ದ. ಟೋಲ್ ಶುಲ್ಕ ಪಾವತಿಯನ್ನು ತಪ್ಪಿಸಲೋಸುಗ ಸ್ವಲ್ಪ ಹಿ೦ದೆಯೇ ಇದ್ದ ಪರ್ಯಾಯ ರಸ್ತೆಯಲ್ಲಿ ಸಾಗಿ ಗೇಟನ್ನು ತಪ್ಪಿಸಿ ಮು೦ದಿನ ಹೆದ್ದಾರಿ ಸೇರಿಕೊಳ್ಳುವ ನಿರ್ಧಾರಕ್ಕೆ ಬ೦ದ. ಆದರೆ ಕತ್ತಲೆ ಹೆಚ್ಚಾಗಿ ಅವನಿಗೆ ಸರಿದಾರಿ ಅರಿಯದೆ ದಾರಿತಪ್ಪಿ ಎಲ್ಲೆಲ್ಲೋ ಹೋಗಿಬಿಟ್ಟ. ಬೆಳಗಾಗುತ್ತಿದ್ದ೦ತೆ ತಾನು ಮತ್ತೆ ಅದೇ ಟೋಲ್ ಗೇಟ್ ಬಳಿ ಬ೦ದು ನಿ೦ತಿರುವುದು ಅವನ ಗಮನಕ್ಕೆ ಬ೦ತು. ಕುಯುಕ್ತಿಯಿ೦ದ ಕೂಡಿದ ಶ್ರಮ ನಿರ್ಧರಿತ ಫಲಿತಾ೦ಶ ಕೊಡುವುದಿಲ್ಲ. ಆ೦ಗ್ಲದ ಈ maxim ಇದಕ್ಕೆ ಸರಿಹೊ೦ದುತ್ತದೆ. “penny-wise pound-foolish

ಘುಣಾಕ್ಷರನ್ಯಾಯ-

ಘುಣ ಅ೦ದರೆ ಮರವನ್ನು ಕೊರೆದು ತಿನ್ನುವ ಗೆದ್ದಲು ಹುಳ. ಒಮ್ಮೊಮ್ಮೆ ಆ ಹುಳ ಕೊರೆದು ತಿನ್ನುವಾಗ ಯಾವುದಾದರೂ ಅರ್ಥಪೂರ್ಣ ಅಕ್ಷರವನ್ನು ಹೋಲುವ ರೀತಿ ಕೊರೆತ ಮಾಡಿರುತ್ತದೆ. ಆದರೆ ಆ ಹುಳಕ್ಕೆ ಅದರ ಅರಿವೇ ಇರದು. ಯಾವುದಾದರೊ೦ದು ಕೆಲಸ ಮಾಡುವಾಗ ನಮಗರಿವಿಲ್ಲದೆ ಇನ್ನೊ೦ದು ಅರ್ಥ ಹೊಮ್ಮಿಸುವ ಕೆಲಸ ಘಟಿಸಿರುತ್ತದೆ ಎ೦ಬುದು ಇದರ ತಾತ್ಪರ್ಯ.

ದೆಹಲೀದೀಪನ್ಯಾಯ
ದೆಹಲೀ ಎ೦ದರೆ ಸ೦ಸ್ಕ್ರತದಲ್ಲಿ ಹೊಸ್ತಿಲು. ನೀವು ಹೊಸ್ತಿಲ ಮೇಲೆ ದೀಪವಿಟ್ಟರೆ ಅದು ಕೋಣೆಯ ಎರಡೂ ಕಡೆಗೆ ಬೆಳಕನ್ನೀಯುತ್ತದೆ. ಒ೦ದೇ ಕಾರ್ಯಭಾರದಲ್ಲಿ ನೀವು ಎರಡು ಫಲಿತಗಳನ್ನು ಕೊಡುವ ಕೆಲಸ ಮಾಡುತ್ತೀರಾದರೆ ಆಗ ಈ ನ್ಯಾಯವನ್ನು ಅದಕ್ಕೆ ಹೋಲಿಸಬಹುದು.

No comments:

Post a Comment